Sunday, October 24, 2010

ಪತ್ರ ಬರೆಯಲಾ...

ಟ್ರಾಫಿಕ್ ಜಾಮಿನಲ್ಲಿ ಕಾದೂ ಕಾದು ಇಂಜನ್ನು ನಿದ್ರೆ ಹೋಗಿತ್ತು. ಹಾಳಾದ ರಿಂಗ್ ರೋಡ್ ಗಳಲ್ಲಿ ಕಾರು ಚಲಿಸುವುದ್ದಕ್ಕಿಂತಲೂ, ಸುಮ್ಮನೆ ನಿಂತಿರುವುದು ಜಾಸ್ತಿ. ಬುರ್ರ್ ಅಂತ ೬೦-೭೦ ರ ವೇಗದಲ್ಲಿ ಎರಡು ನಿಮಿಷ ಓಡಿಸುವುದು, ಮತ್ತೆ ಮುಂದಿನ ಸಿಗ್ನಲ್ ನಲ್ಲಿ ಇಪ್ಪತ್ತು ನಿಮಿಷ ಕಾಯುವುದು. ಅದ್ಯಾಕೋ ಬೆಂಗಳೂರಿನ ಮಂದಿಗೆಲ್ಲಾ ಒಂದೇ ಸಮಯಕ್ಕೆ ಕಾರು ಓಡಿಸುವ ತವಕ. ಸಾಫ್ಟ್ ವೇರಿನಲ್ಲಿರುವವರಿಗೆ ಅನುಕೂಲಕರ ಕಛೇರಿ ಸಮಯವಿದ್ದರೂ, ಎಲ್ಲರಿಗೂ ಒಂಭತ್ತು ಘಂಟೆಗೆ ಮನೆ ಬಿಡಬೇಕು, ಏಳು ಘಂಟೆಗೆ ಆಫೀಸ್ ಬಿಡಬೇಕು. ಇಷ್ಟೊಂದು ಕಾರುಗಳಿಗೆ ರಸ್ತೆ ಸಾಲದೆ, ಅವನ್ನು ನಿಯಂತ್ರಿಸಲು ಟ್ರಾಫಿಕ್ ಪೋಲಿಸುಗಳ ಸಂಖ್ಯೆ ಸಾಲದೆ, ಕಂಪೆನಿ ಸೆಕ್ಯೂರಿಟಿ, ಅವರು ಇವರೆನ್ನೆಲ್ಲಾ ರಸ್ತೆ ಮಧ್ಯ ನಿಲ್ಲಿಸಿ ವಾಹನ ನಿಯಂತ್ರಿಸುವ ಪರಿಸ್ಥಿತಿ. ಯಾವಗ ನೋಡಿದರೂ ಒಂದಲ್ಲಾ ಒಂದು ಕಡೆ ರಸ್ತೆಯಲ್ಲಿ ಕಾರ್ಯಗಾರಿ. ಕಾಲ ಕಳೆಯಲು ನಾನು ಮೊದಮೊದಲು ಕಾರಿನಲ್ಲಿ ಒಂದು ಸಿಡಿ ಇಟ್ಟು ಕೊಂಡು ಆಲಿಸಿಕೊಂಡು ಬರುತ್ತಿದ್ದೆ. ನಂತರ ಒಂದು ಸಿಡಿ ಒಂದು ಬಾರಿ ಪೂರ್ತಿ ಹಾಡಿಸಿದರೂ ಆಫೀಸು ಇನ್ನೂ ತಲುಪದಿರುವ ಪ್ರಸಂಗ. ಇನ್ನೆರಡು ವರ್ಷ ಇದೆ ತರಹ ಆದರೆ ಸಿಡಿಗಳ ಕಂತೆಯೇ ಬೇಕೆನೋ. ಆದುದರಿಂದ ನಾನು ಈಗ ಸಿಡಿ ನಿಲ್ಲಿಸಿ, ಎಫ್ ಎಂ ರೇಡಿಯೊ ಹಾಕಿ ಕೊಂಡು ಹೋಗಲಾರಂಭಿಸಿದ್ದೇನೆ.

ಅದೊಂದು ದಿನ, ಅದೇ ಟ್ರಾಫಿಕ್ ಜಾಮಿನಲ್ಲಿದ್ದಾಗ ರೇಡಿಯೊದಲ್ಲಿ "ಪತ್ರ ಬರೆಯಲಾ, ಇಲ್ಲ ಚಿತ್ರ ಬಿಡಿಸಲಾ" ಎಂಬ ಹಾಡು ಬಂತು. ತುಂಬಾ ಸುಂದರವಾದ ಗೀತೆಯಾದರೂ, ಈ ಆಧುನಿಕ ಜಗತ್ತಿನಲ್ಲಿ ಅದರ ಅರ್ಥ ಮೋಜೆನಿಸಿತು. ಈ-ಮೈಲು, ಎಸ್ ಎಂ ಎಸ್ ಗಳ ಈ ಜಮಾನಾದಲ್ಲಿ ಪತ್ರ ಬರೆಯುವರಾರು? ಅದನ್ನು ಓದುವವರು ಯಾರು? ಡಿಜಿಟಲ್ ಫೋಟೊ, ಪೈಂಟ್ ಶಾಪ್ ಸಾಫ್ಟ್ ವೇರ್ ಗಳ ದುನಿಯಾದಲ್ಲಿ ಚಿತ್ರ ಬಿಡಿಸುವುದೇ? ಹುಡುಗಿಯನ್ನು ಒಲಿಸಲು ಒಂದು ವೇಳೆ ಪತ್ರವನ್ನೇ ಬರೆದಿದ್ದರೆ, ಅದು ಅವಳಿಗೆ ತಲುಪಿ ಅದನ್ನು ಓದುವಷ್ಟರಲ್ಲಿ ಅವಳಿಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಿಯಾನು. ಎರಡೆರಡು ದಿನಕ್ಕೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಬದಲಾಯಿಸುವ ದಿನಗಳಿವು. ಈಗಿನ ಕಾಲದ ಹುಡುಗರಿಗೆ ಅಂಚೆ ಕಛೇರಿ ಎಲ್ಲಿದೆ ಎಂದು ಕೇಳಿದರೆ ದೇವರಾಣೆಗೂ ಗೊತ್ತಿರಲಿಕ್ಕಿಲ್ಲ. ಪತ್ರಗಳು ಏನಿದ್ದರೂ ಬ್ಯಾಂಕಿನ ಸ್ಟೇಟ್ ಮೆಂಟ್ ಗಳು, ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು, ಮದುವೆ ಮುಂಜಿಯ ಆಮಂತ್ರಣ ಪತ್ರಿಕೆ ಇಷ್ಟಕ್ಕೇ ಸಿಮೀತ. ಅಂದರೆ ಕಂಪ್ಯೂಟರ್ ಮತ್ತು ಯಂತ್ರಗಳು ಕಳುಹಿಸುವ ಪತ್ರಗಳೇ ಜಾಸ್ತಿ ವಿನಹ ಮನುಷ್ಯನಿಂದ ಮನುಷ್ಯನಿಗೆ ಪತ್ರಗಳು ಈಗಲೂ ಬರುತ್ತಿವೆಯಾ? ನೀವೆ ಹೇಳಿ.

ನಮ್ಮ ಬಾಲ್ಯದಲ್ಲಿ ಒಂದು ಹಂತ ತಲುಪಿದಾಗ ನಮಗೆಲ್ಲರಿಗೂ ಪತ್ರ ಬರೆಯುವ ಚಟ ಹಿಡಿಸಿತ್ತು. ಹಿರಿಯರು ಹಿರಿಯರಿಗೆ, ಕಿರಿಯರು ಕಿರಿಯರಿಗೆ ತಮ್ಮ ಒಂದು ವಾರದ ಸುದ್ದಿಯನ್ನೆಲ್ಲಾ, ಸುಂದರವಾಗಿ ಎರಡು ಪುಟಗಳಲ್ಲಿ ವರ್ಣಿಸುತ್ತಿದ್ದರು. ಪರಿವಾರದಲ್ಲೊಂದು ಹೊಸ ಜನನ, ಮದುವೆಯಗೆ ಹೋಗಿ ಅಲ್ಲಿಯ ಭಕ್ಷ್ಯದ ಬಗ್ಗೆ, ದೂರದ ಸಂಭಂಧಿಕರೊಬ್ಬರ ಮರಣ, ನೋಡಿದ ಸಿನಿಮಾ ಕಥೆ ಎಂದು ವಿಷಯಗಳು ಅನೇಕವಿದ್ದವು. ಇನ್ನು ಕೆಲವು ಪತ್ರಗಳಲ್ಲಿ, ವ್ಯಂಗ್ಯ ಚಿತ್ರಗಳು, ನಗೆ ಚಟಾಕಿಗಳು, ಚುಟುಕುಗಳು ಇರುತ್ತಿದ್ದವು. ಪ್ರೇಮ ಪತ್ರಗಳೂ ಇದ್ದವೇನೊ, ಅದರ ಬಗ್ಗೆ ಬರೆಯಲು/ತಿಳಿಯಲು ನಾನಿನ್ನೂ ಚಿಕ್ಕವನಾಗಿದ್ದೆ. ಪೋಸ್ಟ್ ಮ್ಯಾನ್ ಬರುವ ವೇಳೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೆವು. ಕೆಲವೊಮ್ಮೆಯಂತು ಒಂದು ಕಚ್ಚಾ ಕಾಗದದಲ್ಲಿ ಮೊದಲು ಬರೆದು ಅದನ್ನು ಅಮ್ಮನವರಲ್ಲಿ ಓದಿಸಿ ಸರಿಯೆಂದ ಮೇಲೆ, ಇನ್ ಲ್ಯಾಂಡ್ ಲೆಟರ್ ಅಥವಾ ಪೋಸ್ಟ್ ಕಾರ್ಡ್ ನಲ್ಲಿ ಇಳಿಸುತ್ತಿದ್ದೆವು. ಎಲ್ಲ ತರದ ಯೋಜನೆ ಮತ್ತು ಸೂಚನೆಗಳನ್ನು ಪತ್ರ ಮುಖಾಂತರ ತಿಳಿಸುತ್ತಿದ್ದೆವು. ಪರಊರಿನಿಂದ ಬರುವ ನೆಂಟರು ಬಸ್ ಯಾ ರೈಲ್ ನಲ್ಲಿ ಬಂದರೆ ಅವರನ್ನು ಸ್ವೀಕರಿಸಲು ಹೋಗುವ ಸಮಯ ಮತ್ತು ತಾರೀಕು ಎರಡು ವಾರ ಮುಂಚೆ ಗೊತ್ತಾಗುತ್ತಿತ್ತು. ಅಪರೂಪಕ್ಕೆ ಮತ್ತು ಅನಿವಾರ್ಯ ಕಾರಣಗಳಿಗೆ ಮಾತ್ರ ಫೋನ್ ಬಳಕೆ.

ಆದರೆ ಈಗೇನು ಹೇಳುತ್ತಿರಾ. ಬಸ್ ಹತ್ತಿದ ಕೂಡಲೇ "ನಾನು ಬಸ್ ಹತ್ತಿದೆ" ಅಂತ ಒಂದು ಕರೆ. "ಬಸ್ ಹೊರಟಿದೆ" ಎಂದು ಇನ್ನೊಂದು ಕರೆ. ಐದು ನಿಮಿಷ ತಡವಾದರೆ ಅದಕ್ಕೊಂದು ಕರೆ. ಪ್ರೇಮಿಗಳಂತೂ ಕೇಳುವುದೇ ಬೇಡ. ಫೋನ್ ಗಳು ಅವರ ಕಿವಿಗೆ ಸದಾ ಕಾಲ ಅಂಟಿಕೊಂಡು ಇರುತ್ತದೆ. ಕೆಲವೊಮ್ಮೆ ನಾನು ಅಪರಿಚಿತ ವ್ಯಕ್ತಿಯೊಬ್ಬ ನನ್ನ ಬಳಿ ಮಾತಾಡುತ್ತಿದ್ದಾನಲ್ಲ ಅಂತ ಪ್ರತ್ಯುತ್ತರ ಕೊಡಲು ಹೋದರೆ, ಅವರು ಮಾತಾಡಿದ್ದು ಬ್ಲೂ ಟೂತ್ ಮತ್ತು ಹ್ಯಾಂಡ್ಸ್ ಫ್ರಿ ಕರೆಗಳಲ್ಲಿ ಎಂದು ತಿಳಿದು ಪೆಕರನಾಗಿದ್ದೇನೆ. ಈಗ ಯಾರೇ ಮಾತನಾಡಿದರೂ ಅವರು ನನ್ನ ಬಳಿ ಮಾತಾಡುತ್ತಿದ್ದಾರೋ ಅಥವಾ ಫೋನಿನಲ್ಲಿದ್ದಾರೋ ಎಂದು ಅವರ ಕಿವಿ, ಕೈ ನೋಡುವ ಪ್ರಸಂಗ. ರಾತ್ರಿಯ ಬಸ್ ನಲ್ಲಿ ಊರಿಗೆ ಹೋಗುವುದೆಂದರೆ ಈಗ ಒಂದು ವಿಚಿತ್ರ ತೊಂದರೆ. ಮೊದಲೇ ಬಾರದ ನಿದ್ರೆ, ಇನ್ನೇನು ನಿದ್ರೆ ಹತ್ತಿ ಬಿಡ್ತು ಅನ್ನುವಷ್ಟರಲ್ಲಿ ಸಹ ಪ್ರಯಾಣಿಕನ ಮೊಬೈಲ್ ಕತ್ತಲಲ್ಲಿ ಕಣ್ಣು ಕುಕ್ಕುವಷ್ಟು ಬೆಳಕು ಮತ್ತು ಕಿವಿ ಹೊಡೆದು ಹೋಗುವಷ್ಟು ಗಟ್ಟಿಯಾಗಿ ಕಿರುಚಿಕೊಳ್ಳುತ್ತದೆ. ಕರ‍ೆಗಳು ಮತ್ತೆ ಅವೇ. "ನಾನು ಇಲ್ಲಿದ್ದೇನೆ... ನೀನು ಏನು ಮಾಡ್ತಾ ಇದ್ದಿಯಾ? ... ಊಟ ಆಯ್ತಾ?" . ಮೊಬೈಲ್ ಬರುವ ಮುನ್ನ ನೀವು ಊಟ ಮಾಡುವುದು ಮತ್ತು ಎಲ್ಲಿರುವುದು ಎಂದು ಹೇಗೆ ತಿಳಿಯುತ್ತಿತ್ತು? . ಆಫೀಸಿನಲ್ಲಿ ಮೀಟಿಂಗ್ ನಲ್ಲಿ, ತುಂಬಾ ಗಂಭೀರ ವಿಷಯ ಚರ್ಚಿಸುತ್ತಿದ್ದಾಗ ಇದಕ್ಕಿದ್ದಂತೆ ಚಿಕ್ಕ ಮಗು ಅಳುವ ಸದ್ದು ಕೇಳಿ "ಮನೆಯಲ್ಲಿದ್ದೇನಾ ನಾನು" ಎಂದು ಬೆಸ್ತು ಬಿದ್ದಿದ್ದೆ. ನೋಡಿದರೆ ಯಾರೋ ಭೂಪನ ಕಾಲರ್ ಟ್ಯೂನ್ ಅದು. ಕಾಲರ್ ಟ್ಯೂನ್, ಹಲೋ ಟ್ಯೂನ್, ಛಲೋ ಟ್ಯೂನ್ ಇವೆಲ್ಲರ ಮಧ್ಯೆ ಟ್ರಿಣ್, ಟ್ರಿಣ್ಎಂದು ಗುಣುಗಿಸುವ ಫೋನ್ ಗಳು ಎಲ್ಲಿ ಕಾಣೆಯಾದವು?

ಆ ಕಾಲದಲ್ಲಿ, ಫೋನ್ ಒಂದು ದುಬಾರಿ ಮತ್ತು ಅಪರೂಪದ ವಿಷಯವಾಗಿತ್ತು. ಪರಊರಿನ ಕರೆಗಳಿಗೆ ಟ್ರಂಕ್ ಬುಕ್ ಮಾಡಿ, ಗಂಟೆಗಟ್ಟಲೆ ಕಾಯುವ ಪ್ರತೀತಿ. ಅದಾದ ಸ್ವಲ್ಪ ವರ್ಷಗಳ ನಂತರ ಎಸ್ ಟಿ ಡಿ ಕರೆಗಳ ದಿನಗಳು ಬಂದವು. ಅದರಲ್ಲೂ ರಾತ್ರಿ ಹತ್ತು ಗಂಟೆಯ ನಂತರ ೧/೪ ದರದಲ್ಲಿ ಕರೆ ಮಾಡಬಹುದಾಗಿತ್ತು. ಹತ್ತು ಗಂಟೆ ಆಗಿದ್ದೆ ತಡ ನಾ ಮುಂದು ತಾ ಮುಂದು ಅಂತ ಜನ ಫೋನ್ ಬೂತಿಗೆ ಮುತ್ತಿಗೆ ಹಾಕುತ್ತಿದ್ದರು. ಎರಡಡಿಯಷ್ಟಗಲದ ಬೂತ್ ಗಳಲ್ಲಿ ಸ್ಟೂಲ್ ನಲ್ಲಿ ಕೂತು ಮಾತುಕತೆ. ಐದು ನಿಮಿಷವಾದರೆ ಸಾಕು, ಹಿಂದಿನವರು ಬಾಗಿಲು ತಟ್ಟಿ ಹೊರಬರಲು ಸೂಚನೆ ಕೊಡುತ್ತಿದ್ದರು. ಆದರೆ ಈಗ ಎಂತಹ ಬದಲಾವಣೆ ನೋಡಿ!

ಮೊಬೈಲ್ ಫೋನ್ ಮೊಡೆಲ್ ಗಳಂತೂ ಈಗ ವಿಪರೀತ ಪ್ರಗತಿ ಕಂಡಿವೆ. ಛಾಯಾಚಿತ್ರ, ಈ-ಮೈಲ್, ರೇಡಿಯೋ, ಮ್ಯೂಸಿಕ್ ಪ್ಲೇಯರ್, ಇಂಟರ್ನೆಟ್, ರೆಕಾರ್ಡರ್ ಹೀಗೆ ಸಾಲು ಸಾಲು ವೈಶಿಷ್ಟ್ಯಗಳು. ಇನ್ನು ಮುಂದೆ ಬಹುಷಃ ಟಿವಿ ರಿಮೋಟ್, ನೈಲ್ ಕಟ್ಟರ್, ಬೆಂಕಿ ಪಟ್ಟಣ, ಸ್ವಿಸ್ ಕತ್ತರಿ, ಪಾಕೆಟ್ ಬಾಚಣಿಕೆ ಇತ್ಯಾದಿ ಎಲ್ಲವೂ ಮೊಬೈಲಿನಲ್ಲೇ ಅಡಗಿರುತ್ತವೆಯೋ ಏನೋ. ಆಟೊ ಡ್ರೈವರ್, ಪಾನ್ ಅಂಗಡಿಯವನು, ಗದ್ದೆ ಕೆಲಸದ ಕೂಲಿ ಎಲ್ಲರ ಹತ್ತಿರ ಒಂದು ಮೊಬೈಲ್. ಇರಬಾರದು ಎಂದು ನಾನು ಹೇಳುತ್ತಿಲ್ಲ. ಇನ್ಫೋಸಿಸ್ ಕಂಪೇನಿಯ ನಂದನ್ ನೀಲಕೇನಿಯವರು ಅದೇನೋ ಎಲ್ಲರಿಗೊಂದು ಗುರುತಿನ ನಂಬರ್ ಕೊಡುವ ಪ್ರಾಜೆಕ್ಟ್ ನಡೆಸುತ್ತಿದ್ದಾರಂತೆ. ಅದರ ಬದಲು ಎಲ್ಲರಿಗೂ ಒಂದು ಮೊಬೈಲ್ ನಂಬರ್ ಕೊಡುವುದು ಸುಲಭವಲ್ಲವೇ?

೧೦ ವರ್ಷಗಳ ಹಿಂದೆ, ಮೊದಮೊದಲು ಮೊಬೈಲ್ ಬಂದಾಗ ಕರೆಗಳ ದರ ಪ್ರತಿ ನಿಮಿಷಕ್ಕೆ ೧೬ ರೂಪಾಯಿ ಆಗಿತ್ತು. ಆ ಕಾಲದಲ್ಲಿ ಮೊಬೈಲ್ ಕರೆಯನ್ನು ಯಾರೂ ಎತ್ತುತ್ತಿರಲಿಲ್ಲ. ಬದಲಿಗೆ ಗಂಡ-ಹೆಂಡತಿ, ಹುಡುಗ-ಹುಡುಗಿಯರು ಬೇರೆ ತರಹ ನಿಯಮವಿಟ್ಟಿದ್ದರು. ಒಂದು ಸಲ ರಿಂಗ್ ಆಗಿ ಕರೆ ರದ್ದಾಗಿದೆ ಅಂದರೆ ಆಫೀಸ್ ನಲ್ಲಿದ್ದೀನಿ ಎಂದರ್ಥ. ಎರಡು ಸಲ ಅಂದರೆ ಕಾರಿನಲ್ಲಿದ್ದೀನಿ ಅಂತ. ಮೂರು ಸಲ ಅಂದರೆ ಲ್ಯಾಂಡ್ ಲೈನಿನಿಂದ ಕರೆ ವಾಪಸ್ಸು ಮಾಡು ಅಂತ. ಒಂದು ತರಹ ಮೋರ್ಸ್ ಕೋಡ್ ಇದ್ದಂತೆ. ಆದರೆ ಈಗೇನು ಅಂತೀರ? ನಿಮಿಷಕ್ಕೆ ೨೯ ಪೈಸೆಗಳು. ಹತ್ತು ವರ್ಷಗಳಲ್ಲಿ ಎಲ್ಲದರ ಬೆಲೆ ಹತ್ತು ಪಟ್ಟು ಜಾಸ್ತಿ ಯಾದರೆ, ಮೊಬೈಲ್ ಕರೆಗಳ ದರವಂತೂ ೩೨ ಪಟ್ಟು ಕಮ್ಮಿ. ೬ ತಿಂಗಳಿಗೊಮ್ಮೆ ಹೊಸ ಪ್ಲಾನು, ಅಗ್ಗದ ಬೆಲೆ ಅಂತ ಜನ ಹೊಸ ನಂಬರು ಕೊಂಡು ಕೊಳ್ಳುತ್ತಲೇ ಇದ್ದಾರೆ. ಸುಮಾರು ತಿಂಗಳ ನಂತರ ಯಾರಿಗಾದರೂ ಕರೆ ಮಾಡಿದರೆ "ಪ್ಲೀಸ್, ಚೆಕ್ ದ ನಂಬರ್ ಯೂ ಹ್ಯಾವ್ ಡಯಲ್ಡ್" ಅಂತ ಯುವತಿಯೊಬ್ಬಳು ದಬಾಯಿಸುತ್ತಾಳೆ. ನಾನು ಪರೀಕ್ಷಿಸಿ ಮತ್ತೆ ಕರೆ ಮಾಡಿದರೆ ಮತ್ತೆ ದಬಾಯಿಸುತ್ತಾಳೆ. "ನೀವು ಡಯಲ್ ಮಾಡಿದ ಸಂಖೈ ಸರಿಯಿದೆಯೆ ಎಂದು ಪರೀಕ್ಷಿಸಿ" ಎಂದು ಈ ಬಾರಿ ಕನ್ನಡದಲ್ಲಿ!

ಅದೊಂದು ದಿನ ನಾವೊಂದಿಷ್ಟು ಕ್ಲಾಸ್ ಮೇಟ್ ಗಳು, ಸುಮಾರು ೧೦ ವರ್ಷಗಳ ನಂತರ ಹೋಟೆಲ್ ಒಂದರಲ್ಲಿ ಭೇಟಿಯಾಗಲು ನಿರ್ಧರಿಸಿದೆವು. ಸುಮಾರು ೬ ಜನ ಇದ್ದೆವು. ಟೇಬಲ್ ಒಂದರಲ್ಲಿ ಕೂತು ಇನ್ನೇನು ಮಾತುಕತೆ ಆರಂಭಿಸಬೇಕು ಅನ್ನುವಷ್ಟರಲ್ಲಿ ಒಬ್ಬನ ಫೋನ್ ರಿಂಗಿಸಿತು. "ಎಕ್ಸ್ ಕ್ಯೂಸ್ ಮಿ" ಅಂತ ಅವನೊಂದು ಮೂಲೆಗೆ ಹೋದ. ಇನ್ನೆರಡು ನಿಮಿಷಗಳಲ್ಲಿ ಮತ್ತೊಬ್ಬನ ಫೋನ್ ಕೂಗಿತು, ಅವನೊಂದು ಮೂಲೆ ಸೇರಿದ. ಹೀಗೆ ಒಬ್ಬೊಬ್ಬರಾಗಿ ಹೋಗಲಾರಂಭಿಸಿದರು. ಕೊನೆಗೆ ಉಳಿದದ್ದು ನಾನು ಮತ್ತೆ ನಾನು ಆಗಾಗ ಭೇಟಿ ಮಾಡುತ್ತಿದ್ದ ಇನ್ನೊಬ್ಬ ಕ್ಲಾಸ್ ಮೇಟ್. ನಾಲ್ಕು ಜನ ನಾಲ್ಕು ಮೂಲೆಗಳಲ್ಲಿ ಫೋನ್ ನಲ್ಲಿ ಮಾತಾಡಿದರೆ, ನಾನು ನನ್ನ ಆ ಕ್ಲಾಸ್ ಮೇಟ್ ತೆಪ್ಪಗೆ ಪೆಪ್ಸಿ ಕುಡಿಯುತ್ತಾ ಒಬ್ಬರ ಮುಖ ಒಬ್ಬರು ನೋಡಿಕೊಂಡು ಕುಳಿತೆವು. "ನಿನಗ್ಯಾರದೂ ಕಾಲ್ ಬರಲ್ವೇನೋ?" ಎಂದು ಕೇಳಿದೆ. "ನೀನೆ ಒಂದು ಕಾಲ್ ಮಾಡಿ ಬಿಡು, ನಾವೂ ಅವರುಗಳು ಬರುವ ತನಕ ಮಾತಾಡ್ಕೊಂಡು ಇರೋಣ" ಎಂದ.

ಇನ್ನು ಈಗಿನ ಹದಿಹರೆಯದ ಹುಡುಗರನ್ನಂತೂ ಕೇಳುವುದೇ ಬೇಡ. ಮೊಬೈಲ್ ಸದಾ ಕೈಯಲ್ಲಿ. ಕಾಲ್ ಇಲ್ಲದ ಸಮಯದಲ್ಲಿ, ತಲೆ ತಗ್ಗಿಸಿ ಕೊಂಡು ಏನೋ ಎಸ್ ಎಂ ಎಸ್ ಕುಟ್ಟುತ್ತಾ ಇರುತ್ತಾರೆ. ಆಂಗ್ಲ ಭಾಷೆಯ ಎಲ್ಲಾ ಪದಗಳನ್ನು ಮತ್ತು ಅದರ ಕಾಗುಣಿತವನ್ನು ಸಂಕ್ಷಿಪ್ತ ಗೊಳಿಸಿ ಅದನ್ನು ಚಿಂದಿ ಚಿತ್ರಾನ್ನ ಮಾಡಿ ಹಾಕಿದ್ದಾರೆ. ಕನ್ನಡದಲ್ಲೂ ಮಾಡಲಾಗುತ್ತದಂತೆ. ಬೇಡಪ್ಪಾ ಬೇಡ, ಒಂದು ಸಲಕ್ಕೆ ಕೇವಲ ಒಂದು ಭಾಷೆಯ ಕೊಲೆ ಮಾಡಿರಪ್ಪ ನೀವು, ಕನ್ನಡವನ್ನು ಅದರ ಪಾಡಿಗೆ ಬಿಟ್ಟು ಬಿಡಿ. ಕೆಲವೊಂದು ಕಾಲಿಂಗ್ ಪ್ಲಾನ್ ಗಳಲ್ಲಿ ರಾತ್ರಿ ಹೊತ್ತು ದರಗಳು ಅಗ್ಗ ಅಥವಾ ಉಚಿತ. ಹಾಗಂತ ಹೊತ್ತಿಲ್ಲದ ಹೊತ್ತಲ್ಲಿ ಕೆಲವೊಂದು ಕರೆಗಳು ಬರಲಾರಂಭಿಸಿದವು. "ಪರ್ವಾಗಿಲ್ಲ ಮಾತಾಡೊ ಸುಮಾರು ನಿಮಿಷಗಳು ಉಳ್ಕೊಂಡಿವೆ, ನಾಳೆಯೊಳಗೆ ಮುಗಿಸಬೇಕು" ಅಂತ ಒಬ್ಬ ಹೇಳಿದ. ರಾತ್ರಿಯ ಹನ್ನೊಂದು ದಾಟಿತ್ತು. "ಮಗ ಅಳ್ತಾ ಇದ್ದಾನೆ ಕಣೋ, ಇನ್ನೊಮ್ಮೆ ಮಾತಾಡೋಣವಂತೆ" ಎಂದು ಹೇಳಿ ತಳ್ಳಿ ಹಾಕಿದೆ. ಕಾಲಿಂಗ್ ಪ್ಲಾನ್ ಗಳನ್ನು ನೋಡಿ ಬಿಟ್ಟು ನಮ್ಮ ನಿದ್ರಾ ಪ್ಲಾನ್ ಗಳನ್ನು ಹಾಕಬೇಕೆ?

ಇನ್ನು ಸ್ವಲ್ಪ ಮಂದಿಯ ಹತ್ತಿರ ಎರಡು ಅಥವಾ ಮೂರು ಮೊಬೈಲ್. ಒಂದು ಆಫೀಸ್ ಮೊಬೈಲು, ಒಂದು ಪರ್ಸನಲ್, ಒಂದು ಕೇವಲ ಇನ್ ಕಮಿಂಗ್ ಕರೆಗಳಿಗೆ ಇತ್ಯಾದಿ ಇತ್ಯಾದಿ. ದೇವರು ಕೊಟ್ಟ ಎರಡು ಕಿವಿಗಳು ಈಗೀಗ ಸಾಲಲ್ಲ್ವೇನೋ. ಇನ್ನು ಮುಂದೆ ಫೋನ್ ಕಂಪೆನಿಗಳು ಫೋನ್ ಜೊತೆ ಕಿವಿ ಉಚಿತ ಎಂದು ಆಫರ್ ಮಾಡಿಯಾರು ಹುಷಾರ್! ಈ ಮಾರ್ಕೆಟಿಂಗ್ ಕಾಲ್ ಗಳಂತೂ ಸದಾಕಾಲ ಕಾಟವೇ.ಕ್ರೆಡಿತ್ ಕಾರ್ಡ್ ಬೇಕಾ, ಪರ್ಸನಲ್ ಲೋನ್ ಬೇಕಾ, ಇನ್ಶೂರೆನ್ಸ್ ಪಾಲಿಸಿ ಬೇಕಾ ಅಂತ ಜೀವ ಹಿಂಡುತ್ತಾವೆ! ದಯವಿಟ್ಟು ಮುಂದೆ ಕಾಲ್ ಮಾಡಬೇಡಿ ಎಂದು ಬೇಡಿದರೆ, ಮುಂದಿನೆ ವಾರ ಮತ್ತೆ ಅವರೇ ಒಂದು ಚೂರು ಮರ್ಯಾದೆ ಇಲ್ಲದಂತೆ ಮಾಡುತ್ತಾರೆ.

ಇನ್ನು ಚಿತ್ರಗಳ ಬಗ್ಗೆ ಮಾತಾಡೋಣ. ಡಿಜಿಟಲ್ ಕ್ಯಾಮರಾ, ಹೊಸ ಹೊಸ ಸಾಫ್ಟ್ ವೇರ್ ಗಳು ಬಂದು ಬಿಟ್ಟು ಈಗ ತೆಗೆದ ಫೋಟೊವನ್ನೇ ಕಾರ್ಟೂನ್ ಚಿತ್ರವಾಗಿ ಪರಿವರ್ತಿಸಬಹುದು. ಡಿಜಿಟಲ್ ಕ್ಯಾಮರಾ ತೆಗೆದು ಕೊಂಡು ಎಲ್ಲಿಗಾದರೂ ಟ್ರಿಪ್ ಹೋದರೆ ನನ್ನ ಪಜೀತಿಯೇ ಬೇರೆ. ಆಗಲೇ ಕ್ಲಿಕ್ಕಿಸಿ, ಅಲ್ಲೇ ಫೋಟೊ ನೋಡಿ "ಅಯ್ಯೋ ನನ್ನ ಪೋಸ್ ಚೆನ್ನಾಗಿ ಬಂದಿಲ್ಲ", "ಸೆರಗು ಸರಿಯಾಗಿರ್ಲಿಲ್ಲ", "ಹಿಂದಗಡೆ ಯಾರೋ ಬಂದು ಬಿಟ್ಟಿದ್ದಾನೆ" ಅಂತ ಸತಾಯಿಸಿ ಹತ್ತಾರು ಫೋಟೊಗಳನ್ನು ಮತ್ತೆ ಮತ್ತೆ ಅದೇ ಜಾಗ ಮತ್ತು ಭಂಗಿಯಲ್ಲಿ ತೆಗೆಸುತ್ತಾರೆ. ಫಿಲಂ ರೋಲ್ ಇಲ್ಲದೇ ಏನೂ ವೆಚ್ಚವಿಲ್ಲದೆ ಫೋಟೊ ತೆಗೆಯಬಹುದಾದರಿಂದ, ಟ್ರಿಪ್ ಮುಗಿವುದರಲ್ಲಿ ತೆಗೆದ ಚಿತ್ರಗಳು ಏಳು ನೂರು. ಅದನ್ನು ಒಂದೊಂದಾಗಿ ನೋಡಿ ಯಾವುದು ಬೇಕು ಯಾವುದು ಬೇಡ ಎಂದು ಕಂಪ್ಯೂಟರ್ ಗೆ ವರ್ಗಾಯಿಸುವಷ್ಟರಲ್ಲಿ ನನ್ನ ತಲೆಯ ಹಲವು ಕೂದಲುಗಳು ಬಿಳಿಯಾದವು. ಒಮ್ಮೆ ರೋಸಿ ಹೋಗಿ, ಹಳೆ ಕ್ಯಾಮರಾದಲ್ಲಿ ಫೋಟೊ ತೆಗೆದು ಮುಗಿದ ರೀಲನ್ನು ಸ್ಟುಡಿಯೋದವನಿಗೆ ಡೆವಲಪ್ ಮೆಂಟ್ ಗೆ ಕೊಟ್ಟೆ. ಅವನು ನನ್ನ ದುರುಗುಟ್ಟಿ ನೋಡಿದ. "ಎಂಥ ಹಳ್ಳಿ ಗುಗ್ಗು ಈತ" ಎಂದು ಮನಸ್ಸಿನಲ್ಲೇ ಅವನು ನನಗಂದಂತಾಯಿತು. ನಾನು ಹಲ್ಲು ಕಿಸುಕಿ ನಕ್ಕೆ.

ಹತ್ತಾರು ಯೋಚನೆಗಳನ್ನು ಮಾಡುತ್ತಿದ್ದ ಮನಸ್ಸು, ಹಿಂದಿನ ಕಾರಿನವನು ಹಾರ್ನ್ ಹಾಕಿದಾಗ ಎಚ್ಚರವಾಯ್ತು. ಪತ್ರ ಬರೆಯಲಾ ಹಾಡು ಮುಗಿದಿತ್ತು. ಅದನ್ನು ಬಹುಃಷ "ಕಾಲ್ ಮಾಡಲಾ, ಇಲ್ಲ ಈ-ಮೈಲ್ ಹಾಕಲಾ" ಎಂದು ಬದಲಿಸಿದ್ದರೆ ಸರಿಯಿತ್ತೇನೋ.
ಸ್ವಲ್ಪ ಮುಂದೆ ಹೋಗಿ ಕಾರು ಮತ್ತೆ ನಿಂತು ಬಿಡ್ತು. ಇನ್ನೊಂದು ಸಿಗ್ನಲ್ ಸಿಕ್ತು. ರೇಡಿಯೋ ಜಾಕಿ ಸ್ವಲ್ಪ ಹೊತ್ತು ಹರಟೆ ಹೊಡೆದು ನಂತರ "ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ, ಆಡೋಣ ನಾವು ಅಲ್ಲಿ ಕೂಚಿ ಕೂಚಿ" ಹಾಡು ಹಚ್ಚಿದ. ಎಲಾ ಇವನ! ಮೊಬೈಲ್ ಗಳ ವಿಕಿರಣಗಳ ಪ್ರಭಾವಕ್ಕೆ, ಗುಬ್ಬಚ್ಚಿಗಳ ಸಂತಾನವೇ ನಾಶವಾಗಿತ್ತಿದೆ ಈಗ. ಇನ್ನು ಗುಬ್ಬಚ್ಚಿ ಗೂಡು ಎಲ್ಲಿ ತಾನೆ ಸಿಗತ್ತೆ? ಸಿಕ್ಕರೂ ಈ ಕೂಚಿ ಕೂಚಿ ಆಟವಾದರೂ ಎಂತದು?

ಈ ಹಾಳು ಟ್ರಾಫಿಕ್ಕಿನಲ್ಲಿ ಇವತ್ತು ಅದ್ಯಾಕೆ ಹಾಡಿನ ಮರ್ಮಗಳ ಬಗ್ಗೆ ತಲೆಕೆಡಿಸುತ್ತಿದ್ದೇನೆ ಎಂದು ಅರ್ಥವಾಗಲಿಲ್ಲ. ರೇಡಿಯೋ ಆಫ್ ಮಾಡಿಬಿಟ್ಟೆ.